ಕಾರೈಕ್ಕಾಲಮ್ಮೆ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಅರುವತ್ತಮೂರು ಪುರಾತನರಲ್ಲಿ (ನೋಡಿ- ಅರುವತ್ತಮೂರು-ಪುರಾತನರು) ಒಬ್ಬಳು. ಚೋಳದೇಶದ ಕಾರೈಕ್ಕಾಲ್ ಎಂಬ ಪಟ್ಟಣದಲ್ಲಿದ್ದಳು. ಹೆತ್ತವರಿಟ್ಟ ಹೆಸರು ಪುನಿತವತಿ. ಪರಮದತ್ತನೆಂಬ ಈಕೆಯ ಪತಿ ವ್ಯಾಪಾರ ನಡೆಸುತ್ತಿದ್ದ. ಒಂದು ದಿನ ಪರಮದತ್ತ ಅಂಗಡಿಯಲ್ಲಿದ್ದಾಗ ಪರಿಚಿತಸ್ಥನೊಬ್ಬ ಎರಡು ಮಾವಿನ ಹಣ್ಣುಗಳನ್ನು ತಂದುಕೊಟ್ಟ. ಅವನ್ನು ಪರಮದತ್ತ ತನ್ನ ಮಡದಿಗೆ ಕಳುಹಿಸಿಕೊಟ್ಟ. ಹಸಿದಿದ್ದ ಒಬ್ಬ ಶಿವಭಕ್ತ ಮನೆಗೆ ಬರಲು ಪುನಿತವತಿ ಅವನನ್ನು ಸತ್ಕರಿಸಿ ಆರೋಗಣೆಗೆ ಒಂದು ಮಾವಿನಹಣ್ಣನ್ನು ಕುಯ್ದು ಬಡಿಸಿದಳು. ಮಧ್ಯಾಹ್ನದ ವೇಳೆಗೆ ಪರಮದತ್ತ ಊಟಕ್ಕೆ ಮನೆಗೆ ಬಂದ. ಗಂಡನಿಗೆ ಊಟದೊಂದಿಗೆ ಉಳಿದ ಮಾವಿನ ಹಣ್ಣನ್ನು ಹೆಂಡತಿ ಬಡಿಸಿದಳು. ಹಣ್ಣು ಬಹಳ ಸವಿಯಾಗಿರುವುದನ್ನು ಕಂಡು ಮತ್ತೊಂದು ಹಣ್ಣನ್ನೂ ತಂದು ಬಡಿಸುವಂತೆ ಗಂಡ ಕೇಳಿದ. ಪುನಿತವತಿ ಆ ಮಾತನ್ನು ಕೇಳಿ ಗಾಬರಿಗೊಂಡಳು. ನಡೆದ ವಿದ್ಯಮಾನವನ್ನು ಹೇಳಲು ಹೆದರಿದಳು. ಬಿಕ್ಕಟ್ಟಿನಿಂದ ತನ್ನನ್ನು ಪಾರು ಮಾಡಬೇಕು ಎಂದು ಉಮಾಪತಿಗೆ ಮೊರೆಯಿಟ್ಟಳು. ಆ ಕ್ಷಣದಲ್ಲಿ ಭಕ್ತೆಯ ಕರೆಗೆ ಶಿವ ಓಗೊಟ್ಟಂತೆ ಪುನಿತವತಿಯ ಕೈಯಲ್ಲಿ ಒಂದು ಮಾವಿನಹಣ್ಣು ಬಿತ್ತು. ಸಂತೋಷಗೊಂಡ ಪುನಿತವತಿ ಆ ಹಣ್ಣನ್ನು ತನ್ನ ಗಂಡನ ಎಡೆಯಲ್ಲಿ ಬಡಿಸಿದಳು. ಪರಮದತ್ತ ಆ ಹಣ್ಣನ್ನು ತಿಂದ. ಮೊದಲು ತಿಂದ ಮಾವಿನಹಣ್ಣಿಗಿಂತ ಅದು ಹೆಚ್ಚು ರುಚಿಕರವಾಗಿರುವುದನ್ನು ಕಂಡು ಬಹಳ ಅಚ್ಚರಿಗೊಂಡ. 'ಇದು ನಾನು ಕಳುಹಿಸಿಕೊಟ್ಟ ಮಾವಿನಹಣ್ಣಲ್ಲ. ಮೂರು ಲೋಕದಲ್ಲೂ ಇಂಥ ಮಧುರವಾದ ಮಾವಿನಹಣ್ಣನ್ನು ಪಡೆಯುವುದು ದುರ್ಲಭ. ಈ ಹಣ್ಣು ಎಲ್ಲಿಯದು? ಇದು ನಿನಗೆ ಹೇಗೆ ಸಿಕ್ಕಿತು?' ಎಂದು ತನ್ನ ಸತಿಯನ್ನು ಕೇಳಿದ. ಆಗ ಹೆಂಡತಿ ಮರೆಮಾಚದೆ ನಡೆದ ಸಂಗತಿಯನ್ನು ಗಂಡನಿಗೆ ತಿಳಿಸಿದಳು. ಪರಮದತ್ತ ಅವಳ ಮಾತುಗಳನ್ನು ನಂಬದಾದ. 'ಪರಶಿವನ ಕೃಪೆಯಿಂದ ನಿನಗೆ ಮಾವಿನಹಣ್ಣು ದೊರೆತದ್ದು ನಿಜವಾದರೆ, ಅದರಂತೆಯೇ ಮತ್ತೊಂದು ಮಾವಿನ ಹಣ್ಣನ್ನು ಈಗ ತರಿಸು, ನೋಡುವ' ಎಂದು ಹೆಂಡತಿಯನ್ನು ಕೇಳಿದ. ಇದನ್ನು ಕೇಳಿ ಪುನಿತವತಿ ವಿವಶಳಾಗಿ ಪರಶಿವನಲ್ಲಿ ಮತ್ತೊಮ್ಮೆ ಮೊರೆಯಿಟ್ಟಳು. ಪ್ರಾರ್ಥನೆ ಫಲಿಸಿ ಕೈಗೆ ಮತ್ತೊಂದು ಹಣ್ಣು ಬಿತ್ತು. ಅದನ್ನು ಪತಿಗೆ ನೀಡಿದಳು. ಅವನು ಅದನ್ನು ತೆಗೆದುಕೊಂಡು ನೋಡಿ ಅಚ್ಚರಿಗೊಂಡ. ಆದರೆ ಆ ಹಣ್ಣು ಅವನ ಕೈಯಲ್ಲಿದ್ದಂತೆಯೇ ಮಾಯವಾಯಿತು. 

 ಪರಮದತ್ತ ಅಂಜಿಕೆಯಿಂದ ನಡುಗಿದ. ಪರಶಿವನ ಅನುಗ್ರಹವನ್ನು ಪಡೆದ ಈ ವನಿತಾರತ್ನ ಮಾನವಕೋಟಿಗೆ ಸೇರಿದವಳಲ್ಲ : ಪರದೈವವೇ ಇರಬೇಕು-ಎಂದು ಬಗೆದ. ಅಂಥವಳೊಡನೆ ಸಂಸಾರ ನಡೆಸುವುದು ತಕ್ಕುದಲ್ಲವೆಂದು ನಿಶ್ಚಿಯಿಸಿದ. ತನ್ನ ಇಂಗಿತವನ್ನು ಯಾರಿಗೂ ತಿಳಿಯಗೊಡದೆ ಪುನಿತವತಿಯ ಸಂಪರ್ಕ ತೊರೆದು ಇರತೊಡಗಿದ. ಕೊನೆಗೊಮ್ಮೆ ಆಕೆಯಿಂದ ದೂರ ಹೋಗಿ ಬಾಳುವ ಸಂಕಲ್ಪ ಮಾಡಿದ. ವ್ಯಾಪಾರದ ಸಲುವಾಗಿ ದೊಡ್ಡದೊಂದು ಹಡಗನ್ನು ನಿರ್ಮಿಸಿ ಸರಕುಗಳನ್ನು ತುಂಬಿಕೊಂಡು ಸಮುದ್ರವನ್ನು ದಾಟಿ ದೇಶಾಂತರಕ್ಕೆ ಹೋಗಿ ಅಮಿತ ಲಾಭ ಸಂಪಾದನೆಮಾಡಿ ಹಿಂದಿರುಗಿ ಚೋಳದೇಶಕ್ಕೆ ಬರುತ್ತ ಪಾಂಡ್ಯದೇಶದ ಒಂದು ರೇವುಪಟ್ಟಣವನ್ನು ಸೇರಿ, ಅಲ್ಲಿ ಒಂದು ವ್ಯಾಪಾರಸ್ಥಾನವನ್ನು ಸ್ಥಾಪಿಸಿಕೊಂಡು ಅಲ್ಲೇ ನೆಲೆಸಿದ. ಅಲ್ಲಿನ ವೈಶ್ಯಕುಲದ ಕನ್ಯೆಯೊಬ್ಬಳನ್ನು ಮದುವೆಯಾದ. ಅವನಿಗೆ ಒಂದು ಹೆಣ್ಣು ಮಗು ಹುಟ್ಟಿತು. ಅದಕ್ಕೆ ಪುನಿತವತಿ ಎಂದೇ ಹೆಸರನ್ನಿಟ್ಟ. 

 ಇತ್ತ ಕಾರೈಕ್ಕಾಲಿನಲ್ಲಿ ಪುನಿತವತಿ ತನ್ನ ಪತಿಯ ಬರವನ್ನು ತವಕದಿಂದ ಇದಿರು ನೋಡುತ್ತಿದ್ದಳು. ಪರಮದತ್ತನ ನೆಲೆಯ ಸುದ್ದಿ ಪುನಿತವತಿಯ ಬಂಧುಬಳಗದವರಿಗೆ ಮುಟ್ಟಿತು. ಅವರು ಪುನಿತವತಿಯನ್ನು ಅವಳ ಪತಿಯಲ್ಲಿಗೆ ಕರೆದೊಯ್ದರು. ಪುನಿತವತಿಯ ಬರವನ್ನು ತಿಳಿದ ಪರಮದತ್ತ ಭಯಭೀತನಾದ. ಹೇಗೋ ಧೈರ್ಯ ತಂದುಕೊಂಡು ತನ್ನ ಕಿರಿಯ ಹೆಂಡತಿಯನ್ನೂ ಮಗಳನ್ನೂ ಕರೆದುಕೊಂಡು ಪುನಿತವತಿ ಇದ್ದೆಡೆಗೆ ಬಂದು ಬಂದವನೇ ಪುನಿತವತಿಯ ಕಾಲ್ಗಳಿಗೆರಗಿ ದಂಡಪ್ರಣಾಮ ಮಾಡಿದ. 'ನಾನು ತಮ್ಮ ಕೃಪೆಯಿಂದ ಈ ಪಟ್ಟಣದಲ್ಲಿ ನಲ್ಮೆಯಿಂದ ಬಾಳುತ್ತಲಿದ್ದೇನೆ, ಈಕೆ ನನ್ನ ಹೆಂಡತಿ ; ಈ ಮಗು ನನ್ನ ಮಗಳು. ಇವಳಿಗೆ ತಮ್ಮ ಹೆಸರನ್ನೇ ಇಟ್ಟಿದ್ದೇನೆ ' ಎಂದು ನುಡಿದ. ಪುನಿತವತಿಯ ಬಳಗದವರು ಪರಮದತ್ತನನ್ನು ಸಂಬೋಧಿಸಿ, ಹೆಂಡತಿಗೆ ಹೀಗೆ ನಮಸ್ಕರಿಸಿದುದೇಕೆಂದು ಕೇಳಿದರು. ಅದಕ್ಕೆ ಪರಮದತ್ತ ಆ ವನಿತಾರತ್ನದಲ್ಲಿ ತಾನು ಒಂದು ಅದ್ಭುತವನ್ನು ಕಂಡುದಾಗಿಯೂ ಆಕೆ ಪರಮದೈವವೇ ಹೊರತು ಮಾನವ ಕೋಟಿಗೆ ಸೇರಿದವಳಲ್ಲವಾದ್ದರಿಂದ ತಾನು ಆಕೆಯನ್ನು ತನ್ನ ಮನದೇವತೆಯಂತೆ ಭಾವಿಸುವುದಾಗಿಯೂ ತಿಳಿಸಿದ ; ತನ್ನಂತೆ ಅವರೂ ಆಕೆಗೆ ನಮಸ್ಕಾರ ಮಾಡಲು ಹೇಳಿದ. ಆ ಮಾತುಗಳನ್ನು ಕೇಳಿ ಅವರೆಲ್ಲರೂ ದಿಙ್ಮೂಢರಾದರು. ಪುನಿತವತಿ ದಿಕ್ಕು ತೋಚದೆ ಮುಕ್ಕಣ್ಣನನ್ನು ಧ್ಯಾನಿಸಿ ಮೌನದಿಂದ ಮೊರೆಯಿಟ್ಟಳು. ಗಂಡನಿಗೆ ಬೇಡದ ಚೆಲುವಿನ ರೂಪ ತನಗೂ ಬೇಡವೆಂದು ಬಗೆದು ತನ್ನನ್ನು ಮರುಳಾಗಿಸುವಂತೆ ಭಗವಂತನಲ್ಲಿ ಬೇಡಿದಳು. ಪರಶಿವನ ಕೃಪೆಯಿಂದ ಆಕೆಯ ಮಾಂಸ ತುಂಬಿದ ದೇಹ ಅಳಿದು ಎಲುಬಿನ ಗೂಡು ಮಾತ್ರ ಉಳಿಯಿತು. ಬಂಧುಬಳಗದವರು ಅವಳ ರೂಪವನ್ನು ನೋಡಿ ಭೀತಿಗೊಂಡು ಅವಳಿಗೆ ಪೊಡಮೊಟ್ಟು ಅಲ್ಲಿಂದ ಹೊರಟುಹೋದರು. ಅಂದಿನಿಂದ ಆಕೆಯನ್ನು ಕಾರೈಕ್ಕಾಲಮ್ಮೆ ಎಂದು ಕರೆಯುವ ರೂಢಿಯಾಯಿತು. 

 ಪಿಶಾಚಿ ರೂಪವನ್ನು ತಳೆದ ಕಾರೈಕ್ಕಾಲಮ್ಮೆ ಹೊಸ ಜ್ಞಾನವನ್ನು ಪಡೆದು ತಿರುಪಾಡುಗಳನ್ನು ಹಾಡುತ್ತ ತೀವ್ರಗತಿಯಿಂದ ನಡೆದು ಕೈಲಾಸ ಪರ್ವತವನ್ನೈದಿದಳು. ಆ ಪವಿತ್ರಸ್ಥಳದಲ್ಲಿ ಕಾಲಿಂದ ನಡೆಯಲಾಗದೆಂದು ತಲೆಯಿಂದ ನಡೆದು ಹೋಗುತ್ತಿದ್ದಳು. ಇವಳ ಬರವನ್ನು ಕಂಡ ಗಿರಿಜೆ ಅಚ್ಚರಿಗೊಂಡು ಮಾದೇವಿಗೆ ಪೊಡಮಟ್ಟು, ತಲೆಯಿಂದ ನಡೆದುಬರುತ್ತಿರುವ ಈ ಮರುಳು ಯಾವುದು, ಎಲ್ಲಿಂದ ಬರುತ್ತಿರುವುದು-ಎಂದು ಬೆಸಗೊಂಡಳು. ಶಂಕರ ಈಕೆಯ ಕಥೆಯನ್ನು ಪಾರ್ವತಿಗೆ ಹೇಳಿದನಲ್ಲದೆ ಕಾರೈಕ್ಕಾಲಮ್ಮೆ ಹತ್ತಿರ ಬರುತ್ತಲೆ ಎನ್ನಮ್ಮೆ ಎಂದು ಬಲು ಪ್ರೀತಿಯಿಂದ ಆಕೆಯನ್ನು ಕರೆದ. ಅಮ್ಮೆಯೂ ಎನ್ನಪ್ಪ ಎಂದು ಉದ್ಗರಿಸುತ್ತ ಮುಂದೆ ಹೋಗಿ ಸದಾಶಿವನ ಪಾದಗಳಿಗೆರಗಿದಳು.

 ಕಾರೈಕ್ಕಾಲಮ್ಮೆಯನ್ನು ನೋಡಿ ವಿರೂಪಾಕ್ಷ 'ನೀನು ಬೇಡುವ ವರವಾವುದು - ಎಂದು ಕೇಳಿದ. 'ದಯಾಪರನಾದ ಶಶಿಧರನೇ, ಅಮರವಾದ ನಿನ್ನ ಅನುಗ್ರಹ ಬೇಕು. ಇನ್ನು ಮುಂದೆ ಹುಟ್ಟು ಇಲ್ಲದಿರಬೇಕು, ಎಂದೂ ನಿನ್ನನ್ನು ಮರೆಯದಿರುವಂತೆ ದಯೆಗೈಯಬೇಕು' ಎಂದ ಅಮ್ಮೆಯ ಪ್ರಾರ್ಥನೆಗೆ ಪರಶಿವ ಅಸ್ತು ಎಂದ. 'ತೆಂಕಣದಲ್ಲಿರುವ ತಿರುವಾಲಂಗಾಡು ಎಂಬ ಪವಿತ್ರಕ್ಷೇತ್ರದಲ್ಲಿ ನಮ್ಮ ತಾಂಡವವನ್ನು ವೀಕ್ಷಿಸುತ್ತ ಮುದಿತಳಾಗಿ ನಮ್ಮನ್ನು ಪಾಡುತ್ತಲಿರು' ಎಂದು ಅನುಗ್ರಹಿಸಿದ. ಅದರಂತೆ ಅಮ್ಮೆ ತಿರುವಾಲಂಗಾಡನ್ನು ತಲುಪಿ ನಟರಾಜನ ವಿಶ್ವತಾಂಡವವನ್ನು ನೋಡಿ ಆನಂದಿಸುತ್ತ ತಿರುಪಾಡುಗಳನ್ನು ಪಠಿಸುತ್ತಲಿದ್ದಳು. ಶಂಕರ ಕರುಣೆದೋರಿ ಅವಳಿಗೆ ಗಣಪದವನ್ನಿತ್ತು ಸಂತೈಸಿದ.

 ಹರಿಹರ ಈಕೆಯ ಕಥೆಯನ್ನು ರಗಳೆಯ ರೂಪದಲ್ಲಿ ಮನೋಜ್ಞವಾಗಿ ಹೇಳಿದ್ದಾನೆ.    

(ಎಂ.ವಿ.ಜೆ.)